ಕ್ಯಾಡಿಸ್ ನೊಣಗಳು

ಕೀಟವರ್ಗದ ಟ್ರೈಕಾಪ್ಟರ ಗಣಕ್ಕೆ ಸೇರಿದ ಕೀಟಗಳು. ನೋಡಲು ಪತಂಗಗಳಂತಿವೆ (ಮಾತ್ಸ್) ದೇಹ ಮತ್ತು ರೆಕ್ಕೆಗಳ ಮೇಲೆ ಕೂದಲಿನ ಹೊದಿಕೆ ಇದೆ. ಇವಕ್ಕೆ ತೆಳುವಾದ ಪೊರೆಯಂಥ ಎರಡು ಜೊತೆ ರೆಕ್ಕೆಗಳಿವೆ. ಆಹಾರವನ್ನು ಕಡಿದು ನುಂಗಲು ಅನುಕೂಲವಾಗುವಂಥ ವದನಾಂಗಗಳಿವೆ. ಇವುಗಳ ಬೆಳೆವಣಿಗೆಯಲ್ಲಿ ಪೂರ್ಣ ರೂಪಪರಿವರ್ತನೆಯನ್ನು ಕಾಣಬಹುದು. ಡಿಂಬಗಳು ಜಲವಾಸಿಗಳು; ನಿಂತ ಇಲ್ಲವೆ ಹರಿವ ನೀರಿನಲ್ಲಿ ವಾಸಿಸುತ್ತವೆ. ಡಿಂಬಗಳು ಮರಳು, ಚಿಕ್ಕಪುಟ್ಟ ಚಿಪ್ಪುಗಳು ಮತ್ತು ಇತರ ಸಸ್ಯವಸ್ತುಗಳಿಂದ ಗೂಡುಗಳನ್ನು ರಚಿಸಿ ಅವುಗಳಲ್ಲಿ ಜೀವಿಸುವುದು. ಒಂದೊಂದು ಪ್ರಭೇದದ ಡಿಂಬವೂ ವಿಶಿಷ್ಟವಾದ ಗೂಡನ್ನು ಕಟ್ಟಿಕೊಳ್ಳುತ್ತದೆ. ಕೆಲವು ಬಗೆಗಳು ಒಂದು ವಿಧದ ರೇಷ್ಮೆಯ ಬಲೆಯನ್ನು ನೇಯ್ದು ಸಣ್ಣಜೀವಿಗಳನ್ನು ಆಹಾರಕ್ಕಾಗಿ ಹಿಡಿಯುತ್ತವೆ. ಕ್ಯಾಡಿಸ್ ನೊಣಗಳ ಡಿಂಬಗಳು ಮೀನು ಮತ್ತಿತರ ಜಲವಾಸಿ ಪ್ರಾಣಿಗಳ ಪ್ರಮುಖ ಆಹಾರವೆನಿಸಿವೆ. 		(ಎನ್.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ